ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ಸತ್ಯವಿಶ್ವಾಸದಲ್ಲಿ (ಈಮಾನ್) ಕರ್ಮಗಳು, ವಿಶ್ವಾಸಗಳು ಮತ್ತು ಮಾತುಗಳು ಸೇರಿದಂತೆ ಅನೇಕ ಶಾಖೆಗಳು ಮತ್ತು ಲಕ್ಷಣಗಳಿವೆ. ಸತ್ಯವಿಶ್ವಾಸದ ಅತ್ಯಂತ ಉನ್ನತ ಮತ್ತು ಶ್ರೇಷ್ಠ ಶಾಖೆಯು 'ಲಾ ಇಲಾಹ ಇಲ್ಲಲ್ಲಾಹ್' ಎಂಬ ವಚನದ ಅರ್ಥವನ್ನು ಸರಿಯಾಗಿ ಅರಿತು ಅದರಂತೆ ಜೀವನ ನಡೆಸುತ್ತಾ ಅದನ್ನು ಉಚ್ಛರಿಸುವುದು. ಅಲ್ಲಾಹು ಏಕೈಕ ಆರಾಧ್ಯನಾಗಿದ್ದಾನೆ; ಅವನ ಹೊರತು ಆರಾಧನೆಗೆ ಅರ್ಹರಾದ ಬೇರೆ ಆರಾಧ್ಯರಿಲ್ಲ ಮತ್ತು ಅವನು ಮಾತ್ರ ಆರಾಧನೆಗೆ ಅರ್ಹನು ಎಂಬುದು ಅದರ ಅರ್ಥ. ರಸ್ತೆಯಲ್ಲಿ ಜನರಿಗೆ ಅಡ್ಡಿಯುಂಟು ಮಾಡುವ ತೊಡಕುಗಳನ್ನು ನಿವಾರಿಸುವುದು ಸತ್ಯವಿಶ್ವಾಸದ ಕರ್ಮಗಳಲ್ಲಿ ಅತ್ಯಂತ ಚಿಕ್ಕದಾಗಿದೆ. ನಂತರ, ಸಂಕೋಚವು ಸತ್ಯವಿಶ್ವಾಸದ ಒಂದು ಲಕ್ಷಣವಾಗಿದೆಯೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ತಿಳಿಸುತ್ತಾರೆ. ಸಂಕೋಚ ಎಂಬುದು ಒಂದು ಗುಣವಾಗಿದ್ದು ಅದು ಸುಂದರವಾದ ಕರ್ಮಗಳನ್ನು ಮಾಡಲು ಮತ್ತು ಕೆಟ್ಟ ಕರ್ಮಗಳನ್ನು ತ್ಯಜಿಸಲು ಉತ್ತೇಜಿಸುತ್ತದೆ.